ಅಖಿಲ ಅಮೇರಿಕಾ ಹವ್ಯಕರ ಒಕ್ಕೂಟದ (HAA) 19ನೇ ದ್ವೈವಾರ್ಷಿಕ ಸಮ್ಮೇಳನದ ವರದಿ

ಅಖಿಲ ಅಮೇರಿಕಾ ಹವ್ಯಕರ ಒಕ್ಕೂಟದ (HAA) 19ನೇ ದ್ವೈವಾರ್ಷಿಕ ಸಮ್ಮೇಳನವು ಜುಲೈ 2 – 3  ಕ್ಕೆ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದ ಸ್ಯಾನ್ ರಮೋನ್ ನಗರದಲ್ಲಿ ವಿಜೃಂಭಣೆಯಿಂದ ಜರುಗಿತು. ಅಖಿಲ ಅಮೇರಿಕಾ ಹವ್ಯಕರ ಒಕ್ಕೂಟ(HAA)ಕ್ಕೆ ಈಗ 40 ವರ್ಷಗಳ ಸಂಭ್ರಮ.

ನಾಲ್ಕು ದಶಕಗಳ ಇತಿಹಾಸವಿರುವ ಈ ಸಂಸ್ಥೆಯ ಅಡಿಯಲ್ಲಿ ಪ್ರತೀ ಎರಡು ವರ್ಷಗಳಿಗೊಮ್ಮೆ ಉತ್ತರ ಅಮೆರಿಕ ಖಂಡದಲ್ಲಿ ವಾಸಿಸುವ ಎಲ್ಲ ಹವ್ಯಕರು ಸೇರಿ ಹವ್ಯಕ ಸಮ್ಮೇಳನವನ್ನು ಆಚರಿಸುತ್ತಾರೆ. ಈ ಸಮ್ಮೇಳನವು ಹವ್ಯಕ ಸಂಸ್ಕೃತಿ, ಸಂಪ್ರದಾಯ, ಇತಿಹಾಸ, ಭಾಷೆ, ಆಹಾರ ಇವೆಲ್ಲವನ್ನೂ ಎತ್ತಿ ಹಿಡಿದು ಹವ್ಯಕರನ್ನು ಒಗ್ಗೂಡಿಸುವ ಒಂದು ಸಂಭ್ರಮಾಚಾರಣೆಯಾಗಿದೆ.

ಸಮ್ಮೇಳನದ ಮೊದಲದಿನ ಜುಲೈ 2. 

 

ಸಮ್ಮೇಳನದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ “ಮೇಳ” ವನ್ನು ಆಯೋಜಿಸಲಾಗಿತ್ತು.ಮಕ್ಕಳಿಗೆ ಇಷ್ಟವಾಗುವಂತಹ ಚಟುವಟಿಕೆಗಳು, ದೊಡ್ಡವರಿಗೆ ಪ್ರಿಯವಾಗುವ ಕಾರ್ಯಕ್ರಮಗಳು, ಹವ್ಯಕರ ಪಾರಂಪರಿಕ ಊಟ ಉಪಹಾರ, ತಿಂಡಿ ತಿನಸುಗಳು, ಹಾಡು, ನಾಟಕ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾಪ್ರದರ್ಶನ ಮೊದಲಾದ ವಿಶೇಷ ಕಾರ್ಯಕ್ರಮಗಳನ್ನು  ಒಳಗೊಂಡ ಈ ಮೇಳ ಎಲ್ಲಾ ಅತಿಥಿ ಅಭ್ಯಾಗತರನ್ನು ಸಂತೋಷ ಪಡಿಸುವಲ್ಲಿ ಸಫಲವಾಯಿತು. ಮೇಳದಲ್ಲಿ ಹಲಸಿನ ಹಣ್ಣನ್ನು ಬಂದವರೆಲ್ಲ ಅವರಿಗೆ ಇಷ್ಟ ಬಂದಷ್ಟು ತಾವೇ ಸೋಯಿಸಿ ತಿನ್ನುವ ಅವಕಾಶ ಮಾಡಲಾಗಿತ್ತು. ನಮ್ಮೂರಿನ ಆಲೆಮನೆಯನ್ನು ನೆನಪಿಸುವ ತಾಜಾ ಕಬ್ಬಿನ ಹಾಲನ್ನು ಬೇಕಾದವರಿಗೆ ಸ್ಥಳದಲ್ಲೇ ಗಾಣದಲ್ಲಿ ತೆಗೆದು ನೀಡಲಾಯಿತು.  ಅಕ್ಕಿ ಕೇಸರಿಬಾತು, ಹಲಸಿನ ಹಣ್ಣಿನ ಕಡುಬು, ಸವತೇಕಾಯಿ ಕಡುಬು, ಹಲಸಿನ ಹಣ್ಣಿನ ಸುಟ್ಟೇವು, ಮಸಾಲಾ ಮಂಡಕ್ಕಿ, ಹಲಸಿನ ಹಣ್ಣು, ಇತ್ಯಾದಿ ಪಾರಂಪರಿಕ ತಿನಿಸುಗಳ ರುಚಿಯನ್ನು ಸವಿಯಲು ಬಂದವರಿಗೆಲ್ಲ ಸಾಧ್ಯವಾಯಿತು.

ನಂತರ, ಮಧ್ಯಾಹ್ನ 4 ಗಂಟೆಗೆ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಗಣೇಶನನ್ನು ಚಂಡೆ, ಭಾಗವತಿಕೆ, ಮಂತ್ರಘೋಷ, ಶಂಖನಾದಗಳನ್ನೊಳಗೊಂಡ ಮೆರವಣಿಗೆಯಲ್ಲಿ, ಹೊತ್ತು ತಂದು ಸಭಾಂಗಣದಲ್ಲಿ ಸ್ಥಾಪಿಸುವ ಮೂಲಕ  ವಿಧಿವತ್ತಾಗಿ ಸಮ್ಮೇಳನವನ್ನು ಪ್ರಾರಂಭಿಸಲಾಯಿತು. ಮುಂದೆ ಅಧ್ಯಕ್ಷರಾದ ಗೋಪಾಲಕೃಷ್ಣ ದಂಪತಿಗಳು ಮತ್ತು ವಿದ್ವಾನ್ ಕುಮಾರ ಜೋಷಿಗಳು, ಸಭಾಪೂಜೆಯನ್ನು ನೆರವೇರಿಸಿ ಸಮ್ಮೇಳನಕ್ಕೆ ಪಾರಂಪರಿಕವಾಗಿ ಚಾಲನೆಯನ್ನು ನೀಡಿದರು. ಇದಾದನಂತರ, ಸ್ಯಾನ್ ರಮೋನ್ ನಗರದ ಮೇಯರ್ – ಡೇವಿಡ್ ಹಡ್ಸನ್, ಅರಮಾನ್ ಸಂಸ್ಥೆಯ ಸ್ಥಾಪಕಿ – ಡಾ. ಅಪರ್ಣಾ ಹೆಗಡೆ,  ಸಮಾಜದ ಹಿರಿಯರಾದ ಶ್ರೀ, ಜಿ. ಪಿ. ಹೆಗಡೆ ದಂಪತಿಗಳು ಹಾಗೂ ಡಾ ಶಿವರಾಮ ಭಟ್ಟ ದಂಪತಿಗಳು ಸಮ್ಮೇಳನವನ್ನು ಉದ್ಘಾಟಿಸಿದರು. ನಂತರ ಸಮ್ಮೇಳನದ ಪ್ರಧಾನ ವಸ್ತುವಾದ “ಸ್ತ್ರೀಶಕ್ತಿ”ಯನ್ನು ಪ್ರತಿಬಿಂಬಿಸುವ ರೂಪಕದೊಂದಿಗೆ ಮನರಂಜನಾ ಕಾರ್ಯಕ್ರಮಗಳು ಪ್ರಾರಂಭವಾದವು. ಭಾರತದಿಂದ ಆಗಮಿಸಿದ ಮರಳು ಚಿತ್ರ ಕಲಾವಿದ ಶ್ರೀ ರಾಘವೇಂದ್ರ ಹೆಗಡೆ ಅವರ “ಮರಳು ಮಾಧುರ್ಯ” ಕಾರ್ಯಕ್ರಮ ಜನರೆಲ್ಲರ ಬಾಯಲ್ಲಿ ವಾಹ್ ಉದ್ಘಾರವನ್ನು ಹೊರಡಿಸಿತು. ಅನೇಕ ಸ್ಥಳೀಯ ಕಲಾವಿದರಿಂದ ಅನೇಕ ನೃತ್ಯ, ನಾಟಕ,  ಹಿಂದುಸ್ಥಾನಿ ಸಂಗೀತ ಕಾರ್ಯಕ್ರಮಗಳು ಸಭಿಕರಿಗೆ ಮನ ರಂಜಿಸಿದವು. ನಮ್ಮ ಸಮುದಾಯದ ಸೃಜನಶೀಲ ಮನಸ್ಸುಗಳಿಗೆ, ಅವರ ಹವ್ಯಾಸವನ್ನು, ಸಾಹಿತ್ಯಿಕ ಬರವಣಿಗೆಗಳನ್ನೂ, ಜೊತೆಗೆ ಸಮ್ಮೇಳನದ ಆಗು ಹೋಗುಗಳನ್ನು ದಾಖಲೀಕರಿಸುವ ಸ್ಮರಣ ಸಂಚಿಕೆ “ ಹವ್ಯಸಿರಿ” ಯನ್ನು, ನಮ್ಮ ಸಮಾಜದ ಪ್ರಮುಖ ಉದ್ಯಮಿ ಶ್ರೀ ವೆಂಕಟ್ರಮಣ ಭಟ್ಟ ದಂಪತಿಗಳು ಲೋಕಾರ್ಪಣೆಗೊಳಿಸಿದರು.
ಹವ್ಯಕ ಸಂಪ್ರದಾಯದ ಊಟದ ನಂತರ “ರಾಗ ತಂಡ” ನಡೆಸಿಕೊಟ್ಟ ಸಂಗೀತ ಸಂಜೆ ಕಾರ್ಯಕ್ರಮ ನಮ್ಮ ಪ್ರೇಕ್ಷಕರೆಲ್ಲರನ್ನು ಸಂಗೀತ ಲೋಕಕ್ಕೆ ಕರೆದೊಯ್ಯಿತು. ಪ್ರೇಕ್ಷಕರೆಲ್ಲ ಅನೇಕ ಹಾಡುಗಳಿಗೆ ಹೆಜ್ಜೆ ಹಾಕಿ

ಕುಣಿಯುವುದರ ಮೂಲಕ ಮೊದಲದಿನದ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

ಸಮ್ಮೇಳನದ ಎರಡನೇಯ ದಿನ ಜುಲೈ 3. 

ಬೆಳಿಗ್ಗೆ 8 ಗಂಟೆಗೆ ಪಂಚಾಯತನ ಪೂಜೆಯೊಂದಿಗೆ ಸಮ್ಮೇಳನದ ಎರಡನೇಯ ದಿನವನ್ನು ಪ್ರಾರಂಭಿಸಲಾಯಿತು. ಬೆಳಗಿನ ಉಪಹಾರದ ನಂತರ 9.30ಕ್ಕೆ ಸರಿಯಾಗಿ ಆರಂಭವಾದ, ಶಾಸ್ತ್ರೀಯ ನೃತ್ಯಗಳು, ಹಾಡುಗಳು, ನಾಟಕಗಳು, ಎಲ್ಲವನ್ನು ಒಳಗೊಂಡ ಮನರಂಜನಾ ಕಾರ್ಯಕ್ರಮ ಇಡೀ ದಿನ ನಡೆಯಿತು. ಸಮ್ಮೇಳನದ ಪ್ರಧಾನ ವಸ್ತು “ಸ್ತ್ರೀಶಕ್ತಿ” ಗೆ ನಿದರ್ಶನವಾಗಿರುವ ಡಾ. ಅಪರ್ಣಾ ಹೆಗಡೆಯವರು ನೀಡಿದ Keynote ಭಾಷಣ, ಅನೇಕರಿಗೆ ಸ್ಫೂರ್ತಿಯನ್ನು ನೀಡಿತು. ನಂತರ, ಭಾರತದಿಂದ ಆಗಮಿಸಿದ್ದ ಜೂ. ಶಂಕರ್ ಅವರ ಗಿಲಿ-ಗಿಲಿ ಮ್ಯಾಜಿಕ್, ಮಕ್ಕಳಾದಿಯಾಗಿ ದೊಡ್ಡವರನ್ನು ವಿಸ್ಮಯಗೊಳಿಸಿತು. ತದನಂತರ ಶ್ರೀ ವಿನಾಯಕ ಹೆಗಡೆಯವರ ನಿರ್ದೇಶನದಲ್ಲಿ, ಇಲ್ಲಿಯೇ ಹುಟ್ಟಿ ಬೆಳೆದ ಮಕ್ಕಳಾದ ಮೇಘನಾ ಹೆಗಡೆ, ಶಿವಾನಿ ಹೆಗಡೆ ಮತ್ತು ಅನೂಪ್ ಭಟ್ಟ ಇವರು, ಸಂಗೀತವನ್ನು ಹಾಡಲು ಮತ್ತು ವಾದ್ಯಗಳನ್ನು ನುಡಿಸಲು ಕಲಿಯುತ್ತಿರುವ ಮಕ್ಕಳಿಗೆ ಅನೇಕ ಹಾಡುಗಳನ್ನು ಹೇಳಿಕೊಟ್ಟ ಕಾರ್ಯಕ್ರಮ “Youth Symphony” ಪ್ರೇಕ್ಷಕರೆಲ್ಲರೂ ವಾಹ್ವ್ ಎನ್ನುವಂತೆ ಮೂಡಿಬಂತು. ಸುಮಾರು ಮೂರು  ತಿಂಗಳಿಂದ, ಅಮೆರಿಕಾ ಖಂಡದಾದ್ಯಂತ ಇರುವ ಮಕ್ಕಳೆಲ್ಲ ಕೇವಲ Onlineನಲ್ಲಿ ಅಭ್ಯಾಸ ಮಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷ. ಇದಾದನಂತರ, ಮುಂದಿನ ಸಮ್ಮೇಳನವನ್ನು ನಡೆಸಲು, 2023 – 24ರ ಅಧ್ಯಕ್ಷರಾದ ಶ್ರೀಮತಿ ಉಷಾ ಕೂಳೂರ್ ಅವರಿಗೆ ನಮ್ಮ ಸಮ್ಮೇಳನದ ಗಂಟೆಯನ್ನು ನೀಡುವ ಮೂಲಕ ಮುಂದಿನ ಸಮ್ಮೇಳವನ್ನು ನಡೆಸಲು ಚಾಲನೆ ನೀಡಲಾಯಿತು. ಅದಾದನಂತರ, ಬ್ರಾಹ್ಮಣ ಸಭೆಯಲ್ಲಿ ಅನೇಕ ವಿದ್ವಾನರು  ಆಶೀರ್ವಚನ ಮಾಡಿ ಮಂತ್ರಾಕ್ಷತೆಯನ್ನು ನೀಡಿ ಸಾಂಪ್ರದಾಯಿಕವಾಗಿ ಕಾರ್ಯಕ್ರಮದ ಸಾರ್ಥಕತೆಯನ್ನು ಸಾರಿದರು.

ಮುಂದಿನ ಕಾರ್ಯಕ್ರಮ, ಹವ್ಯಕರ ಹೆಮ್ಮೆಯ ಕಲೆ ಯಕ್ಷಗಾನ,  ಪ್ರಸಂಗ  “ದಕ್ಷಯಜ್ಞ.” ಭಾರತದಿಂದ ಆಗಮಿಸಿದ ಭಾಗವತರಾದ ಶ್ರೀ ಕೆ. ಜೆ. ಗಣೇಶ ಅವರು ಅನೇಕ ಸ್ಥಳೀಯ ಕಲಾವಿದರಿಗೆ ತರಬೇತಿ ನೀಡಿ ಯಕ್ಷಗಾನವನ್ನು ನಡೆಸಿಕೊಟ್ಟರು. ಪೂರ್ವರಂಗದಿಂದ ಪ್ರಾರಂಭವಾದ ದಕ್ಷಯಜ್ಞ ಪ್ರಸಂಗ ಕೊನೆಗೊಂಡಾಗ ಪ್ರೇಕ್ಷರೆಲ್ಲರೂ ಎದ್ದು ನಿಂತು ಕರತಾಡನವನ್ನು ನೀಡುವಷ್ಟರ ಮಟ್ಟಿಗೆ ಅತ್ಯಂತ ಸುಂದರವಾಗಿ ಮೂಡಿಬಂದಿತು. ಭಾರತ ಮತ್ತು ಅಮೆರಿಕಾ ದೇಶದ ರಾಷ್ಟ್ರಗೀತೆಗಳನ್ನು ಹೇಳುವುದರ ಮೂಲಕ ಸಮ್ಮೇಳದ ಮನರಂಜನಾ ಕಾರ್ಯಕ್ರಮಕ್ಕೆ ತೆರೆಬಿತ್ತು.

ಎರಡು ದಿನದ ಈ ಸಮಾರಂಭದಲ್ಲಿ ಮನೋರಂಜನೆಯೊಂದಿಗೆ ಹವ್ಯಕರ ಪರಂಪರೆಯನ್ನು ಬಿಂಬಿಸುವ, ನಮ್ಮ ಸಾಂಪ್ರದಾಯಿಕ  ಅಡುಗೆಗಳಾದ, ಅಪ್ಪೇಹುಳಿ, ಭೂತಗೊಜ್ಜು, ಕಡ್ಲೆಬೇಳೆ ಪಾಯಸ, ಕುಂಬಳಕಾಯಿ ಹಲ್ವ, ಹೋಳಿಗೆ, ಮಾವಿನ ಹಣ್ಣಿನ ರಸಾಯನ, ಗೋಳಿಬಜೆ, ಹಲಸಿನಹಣ್ಣಿನ ಹಲ್ವಾ, ಬಾಳೆ ಹಣ್ಣಿನ ಹಲ್ವಾ, ತೊಡೆದೇವು ಹಲಸಿನಕಾಯಿ ಚಿಪ್ಸ್, ಬಾಳೆಕಾಯಿ ಚಿಪ್ಸ್ ಇತ್ಯಾದಿ ಕಜ್ಜಾಯ, ತಿಂಡಿ ತಿನಸುಗಳನ್ನು ಕೆನಡಾ, ಭಾರತ ಹಾಗೆಯೇ ಅಮೆರಿಕಾದ ವಿವಿಧ ರಾಜ್ಯಗಳಿಂದ ಆಗಮಿಸಿದ 500ಕ್ಕೂ ಹೆಚ್ಚು ಹವ್ಯಕರು ಸವಿದರು. ಅವರಿಗೆಲ್ಲ ಇದು ತವರೂರಿನ ಸಂಭ್ರಮದ ಮದುವೆ-ಮುಂಜಿ ಕಾರ್ಯಕ್ರಮಗಳನ್ನು ನೆನಪಿಸುವಂತೆ ಮಾಡಿದರೆ, ಸವಿದ ಆಹಾರದ ರುಚಿಯು ಸಮ್ಮೇಳನದ ನೆನಪುಗಳನ್ನು ಬಹುಕಾಲ ಎಲ್ಲರೂ ಮೆಲುಕು ಹಾಕುವಂತಿತ್ತು.

ಅಧ್ಯಕ್ಷರಾದ, ಶ್ರೀ ಗೋಪಾಲಕೃಷ್ಣ ಭಟ್ಟ, ಕಾರ್ಯದರ್ಶಿ, ಶ್ರೀಮತಿ ವಸುಧಾ ಹೆಗಡೆ, ಉತ್ತರ ಕ್ಯಾಲಿಫೋರ್ನಿಯಾ ಹವ್ಯಕ ವಲಯದ ಉಪಾಧ್ಯಕ್ಷರಾದ,  ಶ್ರೀ ಶ್ರೀಪಾದ ಹೆಗಡೆ,  ಶ್ರೀಮತಿ ಸುಜಾತಾ ಭಟ್ಟ  ಮತ್ತು ಬಾಲಕೃಷ್ಣ ಜೋಶಿ ಇವರನ್ನೊಳಗೊಂಡ ಸಮ್ಮೇಳನಾ ಸಂಘಟನಾ ಸಮಿತಿಯ ಜೊತೆ 100 ಕ್ಕೂ ಹೆಚ್ಚು ಸ್ವಯಂಸೇವಕರ ಕಾರ್ಯ, ಸಹಕಾರಗಳಿಂದ 19ನೇ ದ್ವೈವಾರ್ಷಿಕ ಸಮ್ಮೇಳನ ಹವ್ಯಕರ ವೈದಿಕ ಪರಂಪರೆ, ಅತಿಥಿ ಸತ್ಕಾರ, ಸಾಂಪ್ರದಾಯಿಕ ಭೋಜನ, ಹವ್ಯಕತನವನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು.