HAA Convention July 2015, DC
೧೬ನೇ ಅಖಿಲ ಅಮೇರಿಕ ಹವ್ಯಕರ ದ್ವೈವಾರ್ಷಿಕ ಸಮ್ಮೇಳನ ಅಮೇರಿಕದ ರಾಜಧಾನಿಯಾದ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿರುವ ವರ್ಜೀನಿಯ ರಾಜ್ಯದ ಶಾಂಟಿಲಿ ನಗರದಲ್ಲಿ ಹೊಸದಾಗಿ ನಿರ್ಮಿತವಾದ ‘ಚಿನ್ಮಯ ಸೋಮನಾಥ್’ ಪ್ರಾಂಗಣದಲ್ಲಿ ಜುಲೈ ೩ ಮತ್ತು ೪ರಂದು ಬಹಳ ವಿಜ್ರಂಭಣೆಯಿಂದ ಜರುಗಿತು. ಅತ್ಯಂತ ಸೊಗಸಾಗಿ, ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಏರ್ಪಡಿಸಲಾಗಿದ್ದ ಈ ಎರಡು ದಿನಗಳ ಸಮ್ಮೇಳನದಲ್ಲಿ ಅಮೇರಿಕದ ಉದ್ದಗಲದಿಂದ ಸುಮಾರು ೪೪೦ ಹವ್ಯಕರು ಪಾಲ್ಗೊಂಡು, ಹವ್ಯಕ ಇತಿಹಾಸವನ್ನು ನೆನಪಿಸುವುದರ ಜೊತೆಗೆ ತಮ್ಮ ಮುಂದಿನ ತಲೆಮಾರುಗಳಿಗೂ ಹವ್ಯಕ ಸಂಸ್ಕೃತಿಯ ದೀಪ ಬೆಳಗಿಸಿದರು.
ಪಿಕ್ನಿಕ್ ನಿಂದ ಪ್ರಾರಂಭವಾಗಿ, ಪಲ್ಲಕ್ಕಿ ಉತ್ಸವ, ಸಂಗೀತ, ನಾಟಕ, ನೃತ್ಯ, ಯಕ್ಷಗಾನ, ಜಾನಪದ ಕಲೆ, ಫ್ಯಾಷನ್ ಶೋ, ಜುಲೈ ೪ ರ ಪಟಾಕಿ ಪ್ರದರ್ಶನ ಮುಂತಾದ ಕಣ್ಮನ ಸೆಳೆಯುವ ಕಾರ್ಯಕ್ರಮಗಳ ಜೊತೆಗೆ ಕರ್ನಾಟಕದಿಂದ ಬಂದ ಹೆಸರಾಂತ ಕಲಾವಿದರಾದ ಸಂಗೀತ ಕಟ್ಟಿ, ಜೂನಿಯರ್ ಶಂಕರ, ನಾಗರಾಜ ಹೆಗಡೆ ಹಾಗೂ ವಿನಯ ಹೆಗಡೆಯವರ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ಜನರನ್ನು ಮಾಯಾ ಲೋಕಕ್ಕೆ ಕರೆದೊಯ್ಯಿತು. ಸಮ್ಮೇಳನದ ನೆನಪಿಗೆ ಹವ್ಯಕರ ಪರಂಪರೆ, ಭಾಷೆ ಮತ್ತು ಸಂಸ್ಕೃತಿಯ ಪಕ್ಷಿನೋಟವುಳ್ಳ ಉತ್ತಮ ಬರಹಗಳನ್ನು ಒಳಗೊಂಡ ‘ ಹವ್ಯಸಿರಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಸೃಜನಶೀಲ ಹವ್ಯಾಸಗಳು ಹಾಗೂ ಮಕ್ಕಳ ವಿಜ್ಞಾನ ವಿಶೇಷತೆಗಳನ್ನು ಪ್ರದರ್ಶಿಸಲು ಕಲಾ ವಿಜ್ಞಾನ ಮೇಳ ಉತ್ತಮ ವೇದಿಕೆಯಾಯಿತು. ಪೂಜೆ ಪುರಸ್ಕಾರ ಸಂಸ್ಕೃತಿಯುಳ್ಳ ಹವ್ಯಕ ಸಮುದಾಯದ ಸಂಕೇತವಾಗಿ ಶಾಸ್ತ್ರೋಕ್ತವಾದ “ಶ್ರೀ ರುದ್ರಾಭಿಷೇಕ” ಪೂಜಾ ಕಾರ್ಯಕ್ರಮದೊಂದಿಗೆ ಸರ್ವವನ್ನು ಭಗವಂತನಿಗೆ ಸಮರ್ಪಿಸಲಾಯಿತು.
ಸಮ್ಮೇಳನ ಜುಲೈ ೩ರಂದು ಬೆಳಿಗ್ಗೆ ಹೊರಾಂಗಣ (ಪಿಕ್ನಿಕ್, ಆಟೋಟ, ಪರಸ್ಪರ ಪರಿಚಯ) ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು. ತಾಯ್ನಾಡಿನಿಂದ ಸಮ್ಮೇಳನಕ್ಕೋಸ್ಕರ ಸ್ಪೆಷಲ್ ಆಗಿ ತರಿಸಲಾದ ತೊಡದೇವು ಆದಿನದ ಪ್ರಮುಖ ಆಕರ್ಷಣೆಯಾಗಿತ್ತು. ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪಿಕ್ನಿಕ್ ಊಟದ ನಂತರ ಎಲ್ಲರೂ ತಮ್ಮ ತಮ್ಮ ಮನೆ/ ಹೋಟೆಲ್ ಗಳಿಗೆ ತೆರಳಿ, ಫ್ರೆಶ್ ಆಗಿಕೊಂಡು ಅಪ್ಪಟ ಹವ್ಯಕ ಉಡುಪುಗಳನ್ನು ಧರಿಸಿ ಸಾಯಂಕಾಲದ ಉದ್ಘಾಟನಾ ಸಮಾರಂಭಕ್ಕೆ ಚಿನ್ಮಯ- ಸೋಮನಾಥ್ ಪ್ರಾಂಗಣಕ್ಕೆ ಆಗಮಿಸಿದರು. ನೋಂದಣಿ ಹಾಗೂ ಸ್ವಾಗತ ಸಮಿತಿಯವರು ಬಂದ ಅತಿಥಿಗಳನ್ನೆಲ್ಲಾ ಸ್ವಾಗತಿಸಿ, ಅವರವರ ನಾಮ ಫಲಕಗಳನ್ನು ಹಾಗೂ ನೋಂದಣಿ ಕಿಟ್ ಬ್ಯಾಗನ್ನು ಸಮ್ಮೇಳನಾರ್ಥಿಗಳಿಗೆ ಒದಗಿಸಿದರು.
ಜುಲೈ ೩, ಶುಕ್ರವಾರ ಸಂಜೆಯ ಹೊತ್ತಿಗೆ ಹೂವು, ರಂಗೋಲಿ, ಬ್ಯಾನರ್, ಮತ್ತಿತರ ಆಕರ್ಷಣೆಗಳಿಂದ ಅಲಂಕರಿಸಲಾದ ಚಿನ್ಮಯ ಮಂದಿರ ಹಿತಕರ ವಾತಾವರಣ ನಿರ್ಮಿಸಿತ್ತು. ಪಲ್ಲಕ್ಕಿಯ ನಿರ್ಮಾತೃ ರಾಜ್ ಪರ್ತಜೆಯವರು, ಆಗಲೇ ಸಿಂಗಾರಗೊಂಡು ಕೂತಿದ್ದ ಪಲ್ಲಕ್ಕಿಯಲ್ಲಿ ಗಣೇಶನ ವಿಗ್ರಹ ಇಟ್ಟು, ಉಳಿದ ಮೂರು ಜನರೊಂದಿಗೆ ಅದನ್ನು ಭುಜಗಳಿಗೇರಿಸಿ ಶಂಖನಾದ ಹಾಗೂ ತಾಳ, ಘಂಟೆ, ವಾದ್ಯಗಳ ಜೊತೆಗೆ ಚಿನ್ಮಯ ಮಿಷನ್ ಪ್ರಾಂಗಣದಲ್ಲಿ ಪ್ರದಕ್ಷಿಣೆ ಬಂದು “ಶಂಕರ” ಸಭಾಂಗಣದೊಳಕ್ಕೆ ತಂದರು. ಪಲ್ಲಕ್ಕಿ ಉತ್ಸವ ಜನರನ್ನು ಯಾವುದೊ ದೇವಲೋಕಕ್ಕೆ ಕೊಂಡು ಹೋದ ಅನುಭವ ನೀಡಿತು . ನಂತರ ಶ್ರೀ ಎಂ.ಎನ್ . ಭಟ್ ಮದ್ಗುಣಿ( ಹವ್ಯಕ ಮಹಾಸಭೆಯ ಮಾಜಿ ಅಧ್ಯಕ್ಷರು) ಅವರು ಗಣೇಶನಿಗೆ ದೀಪ ಬೆಳಗಿಸುತ್ತಿದ್ದಂತೆ, ವಾಷಿಂಗ್ಟನ್ ಡಿಸಿ ಚಾಪ್ಟರ್ ನ ಪುಟಾಣಿ ಮಕ್ಕಳು “ಶರಣು ಶರಣಯ್ಯ ಶರಣು ಬೆನಕ” ಪ್ರಾರ್ಥನೆಯೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಿದರು. ಪ್ರಸಕ್ತ ಅಮೇರಿಕ ಹವ್ಯಕ ಸಂಘದ ಅಧ್ಯಕ್ಷ ಹಾಗೂ ಸಮ್ಮೇಳನದ ಸಂಚಾಲಕರಾದ ಶಿವು ಭಟ್ ಅವರು ಎಲ್ಲರನ್ನು ಸಮ್ಮೇಳನಕ್ಕೆ ಸ್ವಾಗತಿಸಿ ಎರಡು ದಿನಗಳ ಕಾರ್ಯಕ್ರಮಗಳ ಇಣುಕು ನೋಟ ನೀಡಿದರು. ನಮ್ಮ ಭವ್ಯ ಭಾರತೀಯ ನೃತ್ಯ ಕಲೆಯ ಪ್ರಮುಖ ಅಂಗವಾದ ಭರತನಾಟ್ಯ ಕಾರ್ಯಕ್ರಮದೊಂದಿಗೆ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಳಿಕ ನೃತ್ಯ ಸಂಗಮ, ಕೋಲಾಟ, ಇತ್ಯಾದಿ ನೃತ್ಯ ಪ್ರಕಾರಗಳ ಪ್ರದರ್ಶನದೊಂದಿಗೆ ಸಮ್ಮೇಳನದ ರಂಗಸ್ಥಳ ಗರಿಗೆದರಿ ಸಜ್ಜಾಯಿತು.
ಕರ್ನಾಟಕಕ್ಕೆ ಹೋಗಿ ವರ್ಷಗಟ್ಟಲೆ ಹವ್ಯಕ ಜನರೊಂದಿಗೇ ಇದ್ದು ಆ ಸಮುದಾಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಪುಸ್ತಕಗಳನ್ನೂ ಬರೆದಿರುವ, ಹವ್ಯಕ-ಕನ್ನಡ ಭಾಷೆಯಲ್ಲಿ ಮಾತನಾಡ ಬಲ್ಲ ಅಮೇರಿಕನ್ ಮಹಿಳೆ ‘ಹೆಲೆನ್ ಉಲ್ರಿಚ’ ಸಮ್ಮೇಳನದ ವಿಶೇಷ ಅತಿಥಿಯಾಗಿ ಬಂದು, ಸಮ್ಮೇಳನದ ಸವಿನೆನಪಿಗೆ ಹವ್ಯಕರ ಸಂಸ್ಕೃತಿಯ ಪಕ್ಷಿನೋಟವುಳ್ಳ ‘ಹವ್ಯಸಿರಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ, ‘ಹವ್ಯಕ ಸಂಸ್ಕೃತಿ ಅವತ್ತು- ಇವತ್ತು’ ಎಂಬ ಕುರಿತು ಉಪನ್ಯಾಸವಿತ್ತರು. ನಂತರ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಾಮುಂದು ತಾಮುಂದು ಎಂದು ರೆಡಿ ಆಗಿನಿಂತಿದ್ದವು. ಶುಕ್ರವಾರ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಖ್ಯ ಆಕರ್ಷಣೆ ವಿನಯ್ ಹೆಗಡೆ ಅವರ ‘ಬೆಳಗಿನ ಚಿತ್ತಾರ. ಕಾರ್ಯಕ್ರಮ, ಗ್ಲೋ ಆರ್ಟ್ ಎಲ್ಲರನ್ನು ಬೆರಗುಗೊಳಿಸಿತು. ನಂತರ ವಿಶೇಷ ಆಹ್ವಾನಿತ ಕಲಾವಿದೆ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಭಾವ- ಭಕ್ತಿಧಾರೆ ಗಾಯನ ಕಾರ್ಯಕ್ರಮ ಎಲ್ಲರನ್ನು ಗಾನ ಲೋಕಕ್ಕೆ ಕರೆದೊಯ್ಯಿತು. ರಾತ್ರಿ ಭೋಜನದ ತರುವಾಯ ಯಕ್ಷಮಿತ್ರ ತಂಡದಿಂದ ‘ಶಿವಪಂಚಾಕ್ಷರಿ ಮಹಿಮೆ’ ಯಕ್ಷಗಾನ ಪ್ರದರ್ಶನ (ಪ್ರದರ್ಶನವಿತ್ತು). ಕರಾವಳಿಯ ಪ್ರಸಿದ್ಧ ಯಕ್ಷಗಾನ ಮೇಳಗಳಿಗೆ ಸರಿಸಾಟಿಯಾದ, ಪೂರ್ಣಪ್ರಮಾಣದ ಮೇಳ ಶ್ರೀ ಪರಮ್ ಭಟ್ ಮುಂದಾಳತ್ವದ ಟೊರಾಂಟೋ( ಕೆನಡಾ)ದ ‘ಯಕ್ಷಮಿತ್ರ ತಂಡ. ಇವರು ಪ್ರದರ್ಶಿಸಿದ ಸುಮಾರು ೨ ಘಂಟೆ ಅವಧಿಯ ಯಕ್ಷಗಾನ ಅತ್ಯದ್ಭುತವಾಗಿತ್ತು. ಇದರ ನಡುವೆ ಮಕ್ಕಳಿಗಾಗಿ ಸ್ಪೆಷಲ್ jeopardy ( ರಸಪ್ರಶ್ನೆ) ಯಜುರ್ವೇದ ಸಭಾಂಗಣದಲ್ಲಿ ನಡೆಯಿತು.
ಶನಿವಾರ ಬೆಳಿಗ್ಗೆ ಉಪಾಹಾರದ ನಂತರ ಮಕ್ಕಳು ಹಾಗೂ ದೊಡ್ಡವರಿಂದ ಕಲಾ – ವಿಜ್ಞಾನ ಮೇಳದಲ್ಲಿ ವಸ್ತು ಪ್ರದರ್ಶನ ಪ್ರಾತ್ಯಕ್ಷಿಕೆಗಳು ಪ್ರದರ್ಶಿತವಾದವು. ಅಲ್ಲದೆ ಭಾರತದಿಂದ ಬಂದ ವಿನಯ ಹೆಗಡೆ ಅವರಿಂದ ಮಕ್ಕಳಿಗೆ, ಆವೆ ಮಣ್ಣಿನಲ್ಲಿ ಮೂರ್ತಿ ಮಾಡುವ ವರ್ಕ್- ಶಾಪ್. ಮಣ್ಣಿನಲ್ಲಿ ಮಾಡಿದ ಗೋಪಾಲ್ ಭಟ್ ಅವರ ಮುಖ ಪ್ರತಿಮೆ ಜೀವ ತುಂಬಿದಂತೆ ಇತ್ತು. ‘ವಿಜ್ಞಾನ ಕಲಾ ಮೇಳ’ ಮಕ್ಕಳು ಹಾಗೂ ದೊಡ್ಡವರ ಕ್ರಿಯೇಟಿವಿಟಿ ಮತ್ತು ಪ್ರತಿಭೆಯನ್ನು ಹವ್ಯಕ ಸಮುದಾಯಕ್ಕೆ ಪರಿಚಯಿಸುವಲ್ಲಿ ಬಹಳ ಮುಖ್ಯ ಪಾತ್ರವಹಿಸಿತು. ಪಕ್ಕದ ಹಾಲ್ ನಲ್ಲಿ ರುದ್ರಾಭಿಷೇಕ ಪೂಜಾ ಕಾರ್ಯಕ್ರಮಗಳನ್ನು ರಾಜೇಂದ್ರ ಭಟ್ಟರು ನಡೆಸಿಕೊಟ್ಟರು. “ಶ್ರೀ ರುದ್ರ”ಪಠಣದಲ್ಲಿ ದೊಡ್ಡವರ ಜೊತೆಗೆ ಮಕ್ಕಳು ಸಹ ತಮ್ಮ ದನಿಗೂಡಿಸಿದರು. ಮಂಗಳಾರತಿಯ ಮೊದಲು ಅಮೇರಿಕ ಹವ್ಯಕ ಒಕ್ಕೂಟದ ಹುಟ್ಟಿಗೆ ಕಾರಣೀಕರ್ತರಾಗಿ ಹಾಗೂ ಸಮುದಾಯದ ಒಗ್ಗೂಟಕ್ಕೆ ಕಳೆದ ಹಲವಾರು ದಶಕಗಳಿಂದ ಹಿತೈಷಿಗಳಾಗಿ ( ಸಾಮಾಜಿಕ ಹಾಗೂ ಆರ್ಥಿಕವಾಗಿ) ಪ್ರೋತ್ಸಾಹ ನೀಡುತ್ತಾ ಬಂದಿರುವ ಗಿರಿನಾರಿ ಮತ್ತು ರಾಮಚಂದ್ರ ಭಟ್ಟ ಹಾಗೂ ಕುಸುಮ ಮತ್ತು ರಾಮ ಹೊಸಮನೆ ದಂಪತಿಗಳಿಗೆ ಧ್ರುವ ಕುಂಜರ್ಪಣೆ ದಂಪತಿಗಳು ಫಲಕ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ನಂತರ ‘ಅಯಂ ಬ್ರಹ್ಮನ್’(ಅನಿವಾಸಿ ಯುವಪೀಳಿಗೆಗೆ ಭಾರತೀಯ ಸಂಸ್ಕೃತಿ, ಮುಖ್ಯವಾಗಿ ಶಂಕರ ಭಗವತ್ಪಾದರ ತತ್ವಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಸುಲಭವಾಗಿ ಅರ್ಥವಾಗುವಂತೆ ಡಾ. ಮೈ. ಶ್ರೀ. ನಟರಾಜ ಅವರು ಬರೆದಿರುವ ಕಿರುನಾಟಕ) ಪುಸ್ತಕ ಬಿಡುಗಡೆ ಮಾಡಲಾಯಿತು. ಅದರ ಕೊನೆಗೆ ಮಂಗಳಾರತಿ ಆಗಿ ಪ್ರಸಾದ ವಿತರಣೆ ಸಮಯದಲ್ಲಿ ಪುಟಾಣಿ ಮಗುವಿನಿಂದ ಭಗವದ್ಗೀತ ಕಂಠಪಾಠ ಪಠಣ. ಅದೇ ದಿನ ಅಮೇರಿಕ ದೇಶದ ಹುಟ್ಟು ಹಬ್ಬದ ಪ್ರಯುಕ್ತ ಮಕ್ಕಳು ಅಮೆರಿಕ ದೇಶದ ಪತಾಕೆಯೊಂದಿಗೆ ‘Plegde of Allegiance’ ಹೇಳುವುದರ ಮೂಲಕ ರಾಷ್ಟ್ರಕ್ಕೆ ಗೌರವ ಸಲ್ಲಿಸಿದರು. ತದನಂತರ ವಾಷಿಂಗ್ಟನ್ ಡಿಸಿ ಹವ್ಯಕರು “ಆದಿ ಶಂಕರಾಚಾರ್ಯ” ಕಿರು ನಾಟಕವನ್ನು ಬಹಳ ಸೊಗಸಾಗಿ ಮಾಡಿ ತೋರಿಸಿ ಹವ್ಯಕ ಪರಂಪರೆ ಹಾಗು ಇತಿಹಾಸವನ್ನು ಜನರಿಗೆ ನೆನಪಿಸಿದರು.
ನಂತರದ ಕಾರ್ಯಕ್ರಮ ಭಾರತದಿಂದ ಬಂದಿರುವ ಸಂಗೀತ ಕಲಾವಿದ ನಾಗರಾಜ ಹೆಗಡೆಯವರಿಂದ ಹಿಂದುಸ್ಥಾನಿ ಶೈಲಿಯಲ್ಲಿ ಅಮೋಘ ಕೊಳಲು ವಾದನ. ಶುದ್ಧಸಾರಂಗ್ ರಾಗದ ಪ್ರಸ್ತುತಿಯ ನಂತರ ಭಟಿಯಾಲ್- ಮಾಂಡ್ ಮಿಶ್ರಣದ ಧುನ್ ಮತ್ತೊಂದು ಪಹಾಡಿ ರಾಗದ ಧುನ್ ಗಳನ್ನು ಕೇಳಿದಾಗ ಗೋಕುಲದಲ್ಲಿ ಕೃಷ್ಣ ಬಹುಶಃ ಇದೇ ರೀತಿ ಕೊಳಲು ನುಡಿಸುತ್ತಿದ್ದಿರಬಹುದು ಎಂದುಕೊಂಡರು ಶ್ರೋತೃಗಳು. ಇದರ ನಡುವೆ ಮಕ್ಕಳಿಗೆ ಸ್ಪೆಷಲ್ ”Every Day Illusion” ಪ್ರೋಗ್ರಾಮನ್ನು ತೇಜಸ್ವಿ(Shankar Junior) ಅವರು ಮಕ್ಕಳಿಗೆ ಮಾಡಿ ತೋರಿಸಿದರು. ಮಧ್ಯಾಹ್ನದ ನಂತರವೂ ಒಂದಾದ ಬಳಿಕ ಒಂದು ಉತ್ಕೃಷ್ಟ ಮನರಂಜನಾ ಕಾರ್ಯಕ್ರಮಗಳು. ನೃತ್ಯ, ಹಾಡು, ಫ್ಯಾಶನ್ ಶೋ ಮುಂತಾದವುಗಳ ಜೊತೆಯೇ ಹವ್ಯಕ ರೀತಿರಿವಾಜುಗಳನ್ನು ನೆನಪಿಸುವ ಪ್ರಹಸನಗಳು, ಬಾಸ್ಟನ್ ಹವ್ಯಕರ ‘ಗಪ್ಪತ್ ಹೆಗಡೆ ಕಗ್ಗೊಲೆ ಪ್ರಹಸನ’- ಶೋಲೆ ಗಬ್ಬರ್ ಸಿಂಗ್ ದೃಶ್ಯಾವಳಿಯ ಹವ್ಯಕ ಅವತರಣಿಕೆ ಹೊಟ್ಟೆ ಹುಣ್ಣಾಗುವಷ್ಟು ನಗಿಸಿತು. ನಂತರ ಪ್ರಸಕ್ತ ಕಾರ್ಯದರ್ಶಿ ಉಷಾ ಕೊಳೂರು ಸಂಯೋಜಿಸಿದ ಕಾರ್ಯಕ್ರಮ ಸ್ವರಾಂಜಲಿ(Youth,ಇಂಗ್ಲಿಷ್, ಹಿಂದಿ, ಕನ್ನಡ ಗೀತೆಗಳ ಸಿಂಫೊನಿ). ಅಮೇರಿಕಾ ಮತ್ತು ಕೆನಡಾದ ವಿವಿಧ ಊರುಗಳಲ್ಲಿ ನೆಲೆಸಿರುವ ಸಂಗೀತ ಮತ್ತು ವಾದ್ಯಗಳನ್ನು ಅಭ್ಯಸಿಸುತ್ತಿರುವ ಪುಟ್ಟ ಮಕ್ಕಳನೇಕರು ಶ್ರೀ ವಿನಾಯಕ ಹೆಗಡೆ ಅವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ ‘ಸ್ವರಾಂಜಲಿ’ ಕಾರ್ಯಕ್ರಮ- ಹವ್ಯಕ ಯುವ ಪ್ರತಿಭೆಗಳಿಗೆ ಕೈಗನ್ನಡಿಯಾಯ್ತು. ನ್ಯೂಜರ್ಸಿ ತಂಡದವರ ನೃತ್ಯ ಜನರನ್ನು ಮನರಂಜಿಸಿದರೆ, ಚಿಕ್ಕ ಮಕ್ಕಳ ‘ಇನ್ಸ್ಪೆಕ್ಟರ್’ ಸ್ಕಿಟ್ ಎಲ್ಲರನ್ನು ಹಾಸ್ಯ ಲೋಕದಲ್ಲಿ ಮುಳುಗಿಸಿತು. ಅಲ್ಲದೆ ವಾಷಿಂಗ್ಟನ್ ಡಿಸಿ ಸ್ವಯಂಸೇವಕರಿಂದ ‘ಮೆಟ್ರೋ-ರೆಟ್ರೋ’ ನೃತ್ಯರೂಪಕ ಸಭಿಕರನ್ನು ಭಾರತದ ಚಿತ್ರಲೋಕಕ್ಕೆ ಕೊಂಡುಹೋಯಿತು. ತೇಜಸ್ವಿ ಅವರ ‘ಗಿಲಿ ಗಿಲಿ ಮ್ಯಾಜಿಕ್’ ಪ್ರದರ್ಶನವಂತೂ ಹಿರಿಕಿರಿಯರೆನ್ನದೆ ಎಲ್ಲರನ್ನೂ ರೋಮಾಂಚನಗೊಳಿಸಿತು. ರಾತ್ರಿಯ ಊಟದ ಬಳಿಕ ವಂದನಾರ್ಪಣೆ ಸಮಯದಲ್ಲಿ ಸುಜಾತ ಮತ್ತು ಅನಿಲ್ ಅಡ್ಕೋಳಿ ಅವರು ಚಿಕಾಗೋದಲ್ಲಿ ನಡೆಯುವ ೨೦೧೭ರ ಸಮ್ಮೇಳನಕ್ಕೆ ಎಲ್ಲರಿಗೂ ಆಮಂತ್ರಣವಿತ್ತರು. ಸ್ವಯಂ ಸೇವಕರನ್ನು ಗೌರವಿಸಲಾಯಿತು. ಈ ಸಂಸ್ಥೆಯನ್ನು ಕಳೆದ ೩೩ ವರ್ಷಗಳಿಂದ ನಡೆಸಿಕೊಂಡು ಬಂದ ಎಲ್ಲಾ ಅಧ್ಯಕ್ಷರನ್ನು ಸ್ಮರಿಸಿಕೊಳ್ಳಲಾಯಿತು. ಬಳಿಕ ತಾಯಿನಾಡು ಭಾರತ ಹಾಗೂ ಆಶ್ರಯವಿತ್ತ ಅಮೇರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಗೀತೆಗಳನ್ನು ಹಾಡಿ ಗೌರವಪೂರ್ವಕವಾಗಿ ಸಮ್ಮೇಳನದ ಕಾರ್ಯಕ್ರಮಗಳಿಗೆ ಮಂಗಳ ಹೇಳಲಾಯಿತು. ನಂತರ ಭರ್ಜರಿ ಪಟಾಕಿಪ್ರದರ್ಶನ. ಡಿ. ಜೆಡ್ಯಾನ್ಸ್ ನಲ್ಲಿ ಮಧ್ಯ ರಾತ್ರಿಯ ತನಕ ಎಲ್ಲರೂ ಕುಣಿದು ಕುಪ್ಪಳಿಸಿದರು.
ಒಟ್ಟಿನಲ್ಲಿ ಎರಡು ದಿನವೂ ಒಂದಕ್ಕಿಂತ ಒಂದು ಉತ್ತಮ ಮನರಂಜನಾ ಕಾರ್ಯಕ್ರಮಗಳು. ಪಕೋಡ, ಕಚೋರಿ, ಅಂಬಡೆ, ಸ್ಪೆಷಲ್ ಹೋಳಿಗೆ, ಬಾದಾಮಿ ಪುರಿ, ಪೈನಾಪಲ್ ಕೇಸರಿಬಾತ್, ಕ್ಯಾರಟ್ ಹಲ್ವಾ, ಫ್ರೆಶ್ ಜಿಲೇಬಿ ಇತ್ಯಾದಿ ಹಬ್ಬದ ಊಟೋಪಚಾರ, ಕಾಫಿ-ತಿಂಡಿ ವ್ಯವಸ್ಥೆಯ ರೂವಾರಿ ವಾಷಿಂಗ್ಟನ್ನಿನ ಪ್ರಸಿದ್ಧ ಕನ್ನಡಿಗ ಹೋಟೆಲ್ ಉದ್ಯಮಿ ಆನಂದ್ ಪೂಜಾರ್ ನಿರ್ವಹಿಸಿದ ಊಟ ತಿಂಡಿಗಳ ರುಚಿ ಇನ್ನೂ ನಾಲಿಗೆಯ ತುದಿಯಲ್ಲಿದೆ. ಪ್ರತೀ ಊಟದ ನಂತರ ವಿಶೇಷವಾಗಿ ತರಿಸಿದ ಎಲೆ, ಅಡಿಕೆ(ಕವಳ) ನಮ್ಮ ಹವ್ಯಕರ ಜೀವನ ರೀತಿಯನ್ನು ನೆನಪಿಸಿತು.
ಸಮುದಾಯದವರೆಲ್ಲ ಒಂದೇ ಕುಟುಂಬದವರು,ಒಂದೇ ಮನೆಯವರು ಎಂಬ ಹಬ್ಬದ ವಾತಾವರಣ ಅಲ್ಲಿ ಮೂಡಿತ್ತು. ಮುಖ್ಯವಾಗಿ ವಲಸಿಗರ ಎರಡನೇ ತಲೆಮಾರಿನವರಿಗೆ (ಅಂದರೆ ಇಲ್ಲಿ ಅಮೇರಿಕಾದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ) ಹವ್ಯಕ ಸಂಸ್ಕೃತಿಯ ಮಹತ್ವವನ್ನು ಪರಿಚಯಿಸುವ, ಆಧುನಿಕತೆಯಲ್ಲೂ ಸನಾತನ ಸಂಪ್ರದಾಯಗಳನ್ನು ಅರಿಯುವ ಅವಕಾಶ. ‘ಹ’-ಹಸಿರು ಕಾನನ ಪರಿಸರ; ‘ವ್ಯ’-ವ್ಯಸನ (ಗೀಳು) ವೇದವಾಙ್ಮಯ ವಿಚಾರ; ‘ಕ’-ಕನಸು ಪ್ರತಿಭೆಯ ಮೇರುಶಿಖರ – ಇದು ‘ಹವ್ಯಕ’ ಸಮುದಾಯದ ಒಟ್ಟಿಂದ ಎಂದು ಶ್ರೀವತ್ಸ ಜೋಶಿ ತಮ್ಮಅಭಿಪ್ರಾಯ ತಿಳಿಸಿದರು.
ಬಹಳಷ್ಟು ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳಿದ್ದುದರಿಂದ, ಸಾರ್ವಜನಿಕ ಸದಸ್ಯರ ಸಭೆ ಹಾಗು ವ್ಯಾವಹಾರಿಕ ಕುರಿತಾದ ಸಭೆಗಳು ಮರುದಿನ ಜೂಲೈ ೫ ರಂದು ಬೆಳಿಗ್ಗೆ ಹ್ಯಾಮ್ಟನ್ ಇನ್ ಹೋಟೆಲ್ ನಲ್ಲಿ ನಡೆಯ ಬೇಕಾಗಿ ಬಂತು. ಅದರಲ್ಲಿ ಮುಖ್ಯವಾಗಿ ಹಾ-ಕೃಷಿ ತಂಡ ತಮ್ಮ ಯೋಜನೆಯನ್ನು ಪ್ರಸ್ತುತ ಪಡಿಸಿದರೆ, ಹವ್ಯಕ ಉದಯೋನ್ಮುಖ ಉದ್ಯಮಿಗಳು ತಮ್ಮ ಅನುಭವಗಳನ್ನು ಹವ್ಯಕ ಬಿಸಿನೆಸ್ ನೆಟ್ವರ್ಕ್ (HBN)ನಲ್ಲಿ ಹಂಚಿಕೊಂಡರು. ಸಂಘದ ಆರ್ಥಿಕ-ವ್ಯವಹಾರಗಳ ಚರ್ಚೆಯಾಯಿತು. ದೂರದ ಊರಿನಿಂದ ಬಂದ ಸಮ್ಮೇಳನಾರ್ಥಿಗಳು ವಾಷಿಂಗ್ಟನ್ ಡಿಸಿ ಪ್ರೇಕ್ಷಣಿಯ ಸ್ಥಳಗಳನ್ನು ನೋಡಿ ತಮ್ಮ ತಮ್ಮ ಊರಿಗೆ ತೆರಳಿದರು.
ಒಟ್ಟಿನಲ್ಲಿ, HAA ಅಧ್ಯಕ್ಷ ಶಿವೂ ಭಟ್ ಹಾಗೂ ವಾಷಿಂಗ್ಟನ್ ಡಿಸಿ ವಲಯದ ಎಲ್ಲ ಹವ್ಯಕರ ಹಾಗೂ ಉಳಿದೆಲ್ಲ Chapterನ ಹವ್ಯಕ ಸ್ವಯಂಸೇವಕರು ಓಟ್ಟಾಗಿ ಶ್ರಮವಹಿಸಿದರೆ ಎಂತಹ ಅದ್ಭುತಗಳನ್ನು ಸೃಷ್ಟಿಸಬಹುದು ಎಂಬುದಕ್ಕೆ ೧೬ನೇ ಅಖಿಲ ಅಮೇರಿಕ ಹವ್ಯಕರ ದ್ವೈವಾರ್ಷಿಕ ಸಮ್ಮೇಳನ ನಿದರ್ಶನವಾಯಿತು. ವಿಜೃಂಭಣೆಯ ಈ ಸಮ್ಮೇಳನ ಇತಿಹಾಸವನ್ನು ದಾಖಲಿಸಿತು ಎಂಬ ಸಮ್ಮೇಳನಾರ್ಥಿಗಳ ಮೆಚ್ಚುಗೆಯ ಪ್ರತಿಕ್ರಿಯೆಗಳು ಸ್ವಯಂಸೇವಕರು ಒಂದು ವರ್ಷದಿಂದ ಪಟ್ಟ ಪರಿಶ್ರಮ ಸಾರ್ಥಕ ಎಂಬ ಭಾವವನ್ನು ಪ್ರತಿಪಾದಿಸಿತು.